ನಿರಂಜನಾರ್ಯ
	ಸುಮಾರು 1750. ಕವಿ. ನಂಜುಂಡ ಶತಕ, ನಿಷ್ಕಾಮ ವಚನ ಮತ್ತು ಗಗನಾರ್ಯರ ತತ್ತ್ವಗಳು ಎಂಬುವು ಈತನ ಹೆಸರಿನಲ್ಲಿ ಲಭ್ಯವಿರುವ ಕೃತಿಗಳು. ನಿರಂಜನಾರ್ಯ ಎಂಬುದು ಕವಿಯ ನಿಜನಾಮವೋ ಅಲ್ಲವೋ ಎಂಬುದು ಸ್ಪಷ್ಟವಿಲ್ಲ. ನಂಜುಂಡ ಶತಕದ ಮುಕ್ತಾಯದಲ್ಲಿ ತಾನು ಗಗನಾನಂದ ಗುರುವರ್ಯನ ಶಿಷ್ಯನೆಂದು ಕವಿ ಹೇಳಿಕೊಂಡಿದ್ದಾನೆ. ಈತ ಬ್ರಾಹ್ಮಣನೆಂದು ತೋರುತ್ತದೆ. 

	ನಂಜುಂಡ ಶತಕ ಕಂದ ಪದ್ಯಗಳಲ್ಲಿದ್ದು ಪ್ರತಿ ಪದ್ಯವೂ ಗುರುನಂಜುಂಡಾ ಎಂದು ಮುಗಿಯುತ್ತದೆ. ಇದಕ್ಕೆ ನೀತಿಶಾಸ್ತ್ರ ಎಂಬ ಹೆಸರೂ ಉಂಟು. ಅನುಭಾವ, ನೀತಿ ಈ ಪದ್ಯಗಳ ವಸ್ತು. 

	ನಿಷ್ಕಾಮ ವಚನ ಹಾಡುಗಳ ಸಂಕಲನ. ಇದರಲ್ಲಿ 129 ಹಾಡುಗಳಿರುವುದಾಗಿ ಕವಿಚರಿತೆಕಾರರು ತಿಳಿಸಿದ್ದಾರೆ. ಗಗನಾರ್ಯರ ತತ್ತ್ವಗಳು ಎಂಬುದು ಇನ್ನೊಂದು ಹಾಡಿನ ಸಂಕಲನ. ಈ ಹಾಡುಗಳಲ್ಲಿ ವೇದಾಂತವನ್ನು ಬೋಧಿಸಿದೆ. ಕೆಲವು ಹಾಡುಗಳಲ್ಲಿ ಗುರು ಗಗನಾರ್ಯರನ್ನೇ ಸ್ತುತಿಸಿದೆ. ಗಗನಾರ್ಯ ಎಂಬುದು ಹಾಡುಗಳ ಅಂಕಿತ. ಜೀವನದಲ್ಲಿ ಕಷ್ಟವನ್ನು ಅನುಭವಿಸಿ ಸಾಕಾಗಿ ಸೋತು ಬಹು ಕಷ್ಟಪಟ್ಟೆನಾಭವದಿ ಸಾಕಿನ್ನಹಹ ನಾನೈಕ್ಯವಾಗುವೆ ನಿಮ್ಮ ಪದದಿ ಎಂದು ಕವಿ ಹಾಡಿದ್ದಾನೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ